ವಾರಾಣಸಿ
	ಭಾರತದ ಉತ್ತರಪ್ರದೇಶ ರಾಜ್ಯದ ಒಂದು ಜಿಲ್ಲೆ ಮತ್ತು ಜಿಲ್ಲಾಡಳಿತ ಕೇಂದ್ರ. ಜಿಲ್ಲಾ ವಿಸ್ತೀರ್ಣ 1,550 ಚ.ಕಿಮೀ. ಜನಸಂಖ್ಯೆ: 31,47,927. ಉತ್ತರ ಪ್ರದೇಶದ ಗಂಗಾನದಿಯ ಎಡದಂಡೆ ಮೇಲೆ ಅರ್ಧ ಚಂದ್ರಾಕೃತಿಯಲ್ಲಿರುವ ವಾರಾಣಸಿ ಐತಿಹಾಸಿಕವಾಗಿ, ಧಾರ್ಮಿಕವಾಗಿ ಮತ್ತು ಸಾಂಸ್ಕøತಿಕವಾಗಿ ತನ್ನದೇ ಆದ ಪ್ರಾಮುಖ್ಯವನ್ನು ಪಡೆದುಕೊಂಡಿರುವ ಪುಣ್ಯಕ್ಷೇತ್ರ. ಉತ್ತರ ಪ್ರದೇಶದ ಈ ಮಹಾ ನಗರ 25ಲಿ 20† ಉತ್ತರ ಅಕ್ಷಾಂಶ ಮತ್ತು 83ಲಿ 05† ಪೂರ್ವ ರೇಖಾಂಶದಲ್ಲಿದೆ. ನಗರವಿಸ್ತೀರ್ಣ 83.05 ಚ.ಕಿಮೀ. ಸಮುದ್ರಮಟ್ಟದಿಂದ ಸು. 80.71 ಮೀ ಎತ್ತರದಲ್ಲಿರುವ ಇದರ ಜನಸಂಖ್ಯೆ. 9,29,270. 

	ವಾರಾಣಸಿ ಎಂಬ ಹೆಸರು ವರುಣ ಮತ್ತು ಅಸಿ ಎಂಬ ಎರಡು ಝರಿಗಳಿಂದ ಬಂದಿದ್ದು. ಈ ಝರಿಗಳು ಕ್ರಮವಾಗಿ ಈ ನಗರದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಹರಿಯುತ್ತವೆ. ಮಧ್ಯಕಾಲೀನ ಯುಗದಿಂದಲೂ ಈ ನಗರವನ್ನು ಬನಾರಸ್ ಎಂದೂ ಕರೆಯಲಾಗುತಿತ್ತು. ಇಲ್ಲಿ ಮಧ್ಯ ಶಿಲಾಯುಗದ ಹಾಗೂ ಕ್ರಿ.ಪೂ. 5000ಕ್ಕೆ ಸೇರಿದ ಸೂಕ್ಷ್ಮಶಿಲಾಯುಧ ಸಂಸ್ಕøತಿಯ ಅವಶೇಷಗಳು ದೊರಕಿವೆ. 1956 ಮೇ 24ರಂದು ಈ ನಗರವನ್ನು ವಾರಾಣಸಿಯೆಂದು ಪುನರ್‍ನಾಮಕರಣ ಮಾಡಲಾಯಿತು. ಇದು ಅತ್ಯಂತ ಪ್ರಾಚೀನ ನಗರವಾಗಿದ್ದು ರಾಮಾಯಣ ಮತ್ತು ಮಹಾಭಾರತಗಳಲ್ಲೂ ಉಲ್ಲೇಖಿಸಲ್ಪಟ್ಟಿದೆ. ಬುದ್ಧ ಈ ನಗರಕ್ಕೆ ಭೇಟಿ ನೀಡಿದ್ದಾಗ ಇದು ಅತ್ಯಂತ ಸಂಪದ್ಭರಿತ ವ್ಯಾಪಾರ ಕೇಂದ್ರವಾಗಿತ್ತು. ಪ್ರಸಿದ್ಧಬುದ್ಧ ಸ್ತೂಪವಿರುವ ಸಾರಾನಾಥ ಈ ನಗರಕ್ಕೆ 10 ಕಿಮೀ ದೂರದಲ್ಲಿದೆ. ಇಲ್ಲಿ ಕ್ರಿ.ಪೂ 500ರಲ್ಲಿ ಪ್ರಥಮ ಬೌದ್ಧ ಸಮ್ಮೇಳನ ನಡೆದು ಬುದ್ಧ ತನ್ನ ಪ್ರಥಮ ಜ್ಞಾನೋಪದೇಶ ಮಾಡಿದ್ದ ಎಂದು ಹೇಳಲಾಗಿದೆ. ಅಮೆರಿಕದ ಪ್ರಸಿದ್ಧ ಲೇಖಕ ಮಾರ್ಥ್ ತೈವಾನ್ ಎಂಬವನು “ಬನಾರಸ್ ನಗರ ಇತಿಹಾಸಕ್ಕಿಂತಲೂ ಪ್ರಾಚೀನವಾದದ್ದು, ಸಂಪ್ರದಾಯಕ್ಕಿಂತಲೂ ಹಳೆಯದಾದದ್ದು, ಪುರಾಣ ಐತಿಹ್ಯಕ್ಕಿಂತಲೂ ಹಿರಿಯದಾದದ್ದು ಮತ್ತು ಇವೆಲ್ಲದರ ಒಟ್ಟು ಮೊತ್ತದ ಎರಡರಷ್ಟು ಪುರಾತನವಾದಂತೆ ಗೋಚರಿಸುತ್ತದೆ” ಎಂದು ಹೇಳಿದ್ದಾನೆ.

	ವಾಯುಗುಣ: ವಾರಾಣಸಿ ಕರ್ಕಾಟಕ ಸಂಕ್ರಾಂತಿ ವೃತ್ತಕ್ಕೆ ಹತ್ತಿರವಾಗಿರುವುದರಿಂದ ಚಳಿಗಾಲ ಹೆಚ್ಚು. ಸರಾಸರಿ ಹಗಲು ಉಷ್ಣಾಂಶ 20ಲಿ ಸೆಲ್ಸಿಯಸ್ ಇದ್ದು ಹಿತಕರವಾಗಿರುತ್ತದೆ. ಡಿಸೆಂಬರ್ ಕೊನೆಯವಾರದಿಂದ ಜನವರಿಯವರೆಗೆ ಉಷ್ಣಾಂಶ 10ಲಿ ಸೆ.ಗೆ ಇಳಿಯುತ್ತದೆ. ಈ ಅವಧಿಯಲ್ಲಿ ಮಧ್ಯಾಹ್ನದವರೆಗೂ ಮಂಜು ಕವಿದಿರುತ್ತದೆ. ಅಕ್ಟೋಬರ್-ನವೆಂಬರ್ ಮತ್ತು ಫೆಬ್ರವರಿ-ಮಾರ್ಚ್‍ಗಳಲ್ಲಿ ಸಾಕಷ್ಟು ಬಿಸಿಲಿದ್ದು ಹವಾಮಾನ ಹಿತಕರವಾಗಿರುತ್ತದೆ. ಬೇಸಗೆ ಕಾಲ ಏಪ್ರಿಲ್‍ನಿಂದ ಪ್ರಾರಂಭವಾಗಿ ಜೂನ್ ತಿಂಗಳವರೆಗೂ ಮುಂದುವರಿಯುತ್ತದೆ. ಆ ಅವಧಿಯಲ್ಲಿ ಹೆಚ್ಚಾಗಿ ಒಣಹವೆಯಿದ್ದು ಹಗಲಿನ ಉಷ್ಣಾಂಶ ಕೆಲವೊಮ್ಮೆ 45ಲಿ ಸೆಲ್ಸಿಯಸ್‍ನ್ನು ತಲಪುತ್ತದೆ. ಮಾನ್‍ಸೂನ್ ಮಳೆ ಜೂನ್ ಅಥವಾ ಜುಲೈ ತಿಂಗಳಲ್ಲಿ ಪ್ರಾರಂಭವಾಗಿ ಸೆಪ್ಟಂಬರ್ ಕೊನೆ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಕೊನೆಗೊಳ್ಳುತ್ತದೆ.

	ಆರ್ಥಿಕತೆ: ವಾರಾಣಸಿ ಹಲವು ಕೈಗಾರಿಕೆ ಮತ್ತು ವಸ್ತುಗಳಿಗೆ ಪ್ರಸಿದ್ಧವಾಗಿದೆ. ಹಿತ್ತಾಳೆಯ ಕಲಾತ್ಮಕ ವಸ್ತುಗಳು ದಂತ, ರೇಷ್ಮೆನೂಲು ಮತ್ತು ಆಭರಣಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿದೆ. ಹತ್ತಿ, ಉಣ್ಣೆ ಮತ್ತು ರೇಷ್ಮೆ ಕೈಗಾರಿಕೆಗಳು ಇಲ್ಲಿ ಪ್ರಮುಖವಾದವು. ಇದಲ್ಲದೆ ಈ ನಗರದಲ್ಲಿ ಸಿದ್ಧಪಡಿಸಿದ ಜರತಾರಿ ಕಸೂತಿ ಮಾಡಿದ ರೇಷ್ಮೆ ವಸ್ತ್ರ ಮತ್ತು ರೇಷ್ಮೆಗೆ ತುಂಬಾ ಬೇಡಿಕೆಯಿದ್ದು ಇವುಗಳನ್ನು ಅನೇಕ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಇಲ್ಲಿಯ ರೇಷ್ಮೆ ಸೀರೆಗಳು ಬನಾರಸ್ ಸೀರೆ ಎಂದೇ ಪ್ರಸಿದ್ಧಿ ಹೊಂದಿವೆ. ವಾರಾಣಸಿ ಉತ್ತರ ಭಾರತದ ಸೀರೆಯ ಉತ್ಪಾದನಾ ಕೇಂದ್ರವೆಂದೂ ಪ್ರಸಿದ್ಧವಾಗಿದೆ.

	ಧರ್ಮ: ವಾರಾಣಸಿಯಲ್ಲಿ ಹಿಂದು, ಮುಸ್ಲಿಮ್, ಬೌದ್ಧ ಮತ್ತು ಜೈನಧರ್ಮಗಳಿವೆ. ಧಾರ್ಮಿಕ ನಗರವಾಗಿ ಇಲ್ಲಿ ಹಿಂದುಧರ್ಮಕ್ಕೆ ವಿಶೇಷವಾದ ಸ್ಥಾನವಿದೆ. ಈ ನಗರದಲ್ಲಿರುವ ಕಾಶಿ ವಿಶ್ವನಾಥ ದೇವಾಲಯ ಇಡೀ ಭಾರತದಲ್ಲೆ ಪ್ರಖ್ಯಾತಿಯಾಗಿದ್ದು ಹಿಂದುಗಳಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. ಇಲ್ಲಿನ ಹಿಂದುಗಳು ಪ್ರಮುಖ ಹಬ್ಬಗಳಾದ ಮಕರ ಸಂಕ್ರಾಂತಿ, ಮಹಾಶಿವರಾತ್ರಿ, ರಾಮನವಮಿ ಮತ್ತು ದಸರ ಹಬ್ಬಗಳನ್ನು ಆಚರಿಸುತ್ತಾರೆ.

	ಈ ನಗರದಲ್ಲಿ ತಾಂಡಿ ಸ್ಥಳೀಯ ಪಾನೀಯವಿದ್ದು ಇದನ್ನು ಹೆಚ್ಚಾಗಿ ಬೇಸಗೆ ಅವಧಿಯಲ್ಲಿ ಬಳಸುತ್ತಾರೆ. ವಾರಾಣಸಿ ಲಂಗ್ಡಾ ಎಂಬ ಮಾವಿನ ಹಣ್ಣಿಗೂ ಪ್ರಸಿದ್ಧ.

	ಕಲೆ ಮತ್ತು ಸಂಸ್ಕøತಿ: ಸಾಂಸ್ಕøತಿಕ ಚಟುವಟಿಕೆಗಳಿಗೂ ಈ ನಗರ ಪ್ರಸಿದ್ಧವಾದದ್ದು. ಹಬ್ಬಹರಿದಿನಗಳಲ್ಲಿ ಸಂಗೀತ ಗೋಷ್ಠಿಗಳನ್ನೇರ್ಪಡಿಸುವುದರ ಜೊತೆಗೆ ಜನಪದ ಕಲೆಗಳನ್ನು ಪ್ರದರ್ಶಿಸುವುದುಂಟು. ಇಲ್ಲಿನ ಕೆಲವು ಮನೆತನಗಳು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಪ್ರಸಿದ್ಧವಾದವು. ಪ್ರಸಿದ್ಧ ಸಂಗೀತಗಾರರಾದ ಪಂಡಿತ್ ಕಿಶನ್ ಮಹಾರಾಜ ಮತ್ತು ಶಾಂತ ಪ್ರಸಾದ್ (ತಬಲ), ಉಸ್ತಾದ್ ಬಿಸ್ಮಿಲ್ಲಾ ಖಾನ್(ಶಹನಾಯಿ) ಮತ್ತು ಪಂಡಿತ್ ರವಿಶಂಕರ್ (ಸಿತಾರ್) ಇಲ್ಲಿಯವರು.

	ಪ್ರತಿವರ್ಷ ಶಿವರಾತ್ರಿಯ ವೇಳೆಯಲ್ಲಿ (ಫೆಬ್ರವರಿ ಅಥವಾ ಮಾರ್ಚಿಯಲ್ಲಿ) ದೃಪದ ಮೇಳದ ಹಾಡುಗಾರಿಕೆಯ ಉತ್ಸವ ನಡೆಯುವುದು. ಸೂಫಿ ಪಂಥಕ್ಕೆ ಸೇರಿದ ಮುಸ್ಲಿಮರು ಗುರುವಾರದಂದು ಕವ್ವಾಲಿಗಳನ್ನು ಹೆಚ್ಚಾಗಿ ಹಾಡುತ್ತಾರೆ. ಗಾಳಿಪಟ ಹಾರಿಸುವುದು ಇಲ್ಲಿನ ಜನರ ಮತ್ತೊಂದು ಹವ್ಯಾಸ. ಇದಲ್ಲದೆ ಈ ನಗರ ಹಿಂದಿನಿಂದಲೂ ಆಯುರ್ವೇದ ವೈದ್ಯ ಪದ್ಧತಿಯ ಕೇಂದ್ರವಾಗಿದ್ದು, ಸಾಂಪ್ರದಾಯಿಕ ಭಾರತೀಯ ವೈದ್ಯ ಪದ್ಧತಿಗೆ ಹೆಸರುವಾಸಿಯಾಗಿದೆ.

	ಶಿಕ್ಷಣ: ವಾರಾಣಸಿ ಪ್ರಾಚೀನ ಕಾಲದಿಂದಲೂ ಪ್ರಪಂಚದ ಪ್ರಮುಖ ವಿದ್ಯಾಕೇಂದ್ರಗಳಲ್ಲೊಂದಾಗಿದೆ. ಸಮಾಜ ಸುಧಾರಕ ಮದನ ಮೋಹನ ಮಾಳವೀಯರವರು ಸ್ಥಾಪಿಸಿದ ಬನಾರಸ್ ಹಿಂದು ವಿಶ್ವವಿದ್ಯಾಲಯ ಭಾರತದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದು. ಇಲ್ಲಿ ಆಧುನಿಕ ವಿಜ್ಞಾನಗಳ ಜೊತೆಗೆ ಸಂಸ್ಕøತ ಭಾಷೆ, ಕಲೆ, ಸಂಗೀತ, ಸಂಸ್ಕøತಿ ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡಲಾಗುತ್ತದೆ. ಪಾಶ್ರ್ವನಾಥ ವಿದ್ಯಾಪೀಠ ಈ ನಗರದ ಮತ್ತೊಂದು ವಿದ್ಯಾ ಕೇಂದ್ರ.

	ಪ್ರೇಕ್ಷಣೀಯ ಸ್ಥಳಗಳು: ವಾರಾಣಸಿಯಲ್ಲಿ ಕಂಡುಬರುವ ಪ್ರಮುಖ ಪ್ರೇಕ್ಷಣೀಯ ಸ್ಥಳಗಳೆಂದರೆ ಆಲಂಗೀರ್ ಮಸೀದಿ, ದುರ್ಗಾ ದೇವಸ್ಥಾನ, ವಿಶ್ವನಾಥ ದೇವಸ್ಥಾನ, ಭಾರತ ಮಾತಾ ದೇವಸ್ಥಾನ, ತುಳಸಿ ಮಾನಸ ದೇವಸ್ಥಾನ. ಇಲ್ಲಿ ಪುರಾತತ್ತ್ವ ಇಲಾಖೆಯ ವಸ್ತು ಸಂಗ್ರಹಾಲಯವಿದೆ. ಇಲ್ಲಿನ ಗಂಗಾನದಿ ದಂಡೆಗಳು ಹಿಂದುಗಳ ಪವಿತ್ರ ಸ್ಥಳಗಳೆಂದು ಪರಿಗಣಿಸಲ್ಪಟ್ಟಿದ್ದು ಅನೇಕ ಧಾರ್ಮಿಕ ಚಟುವಟಿಕೆಗಳ ಕೇಂದ್ರ ಬಿಂದುಗಳಾಗಿವೆ. ವಾರಾಣಸಿ ಒಂದು ಪ್ರಮುಖ ರೈಲು ನಿಲ್ದಾಣ ಕೇಂದ್ರ. ಆಧುನಿಕ ಸಂಚಾರ ಸಂಪರ್ಕ ಸಾಧನೆಗಳನ್ನೊಳಗೊಂಡಿದೆ.					
	(ಬಿ.ಎನ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ